ಸಾಫ್ಟ್‌ವೇರ್ ಕಂಪೆನೀಲಿ ಏನು ಮಾಡ್ತಾರೆ…?
ಈ ಪ್ರಶ್ನೆಯನ್ನು ಇಲ್ಲಿಯವರೆಗೆ ಕಡಿಮೆಯೆಂದರೂ ನೂರು ಜನರಾದರೂ ನನ್ನ ಬಳಿ ಕೇಳಿದ್ದಾರೆ.
ಅದಕ್ಕೊಂದು ಕಥೆ ಹೇಳುತ್ತೇನೆ..ಕಥೆಯ ಹೀರೋ `ಟಾಮ್` ಕೈಯಲ್ಲಿ ಬಣ್ಣ ತುಂಬಿದ ಡಬ್ಬಿ ಮತ್ತು ಬ್ರಶ್ ಹಿಡಿದು ಜೋಲು ಮುಖ ಹೊತ್ತು ಬರುತ್ತಾನೆ. ಅವನಿಗೆ ಮನೆಯ ಸುತ್ತಲಿನ, ಉದ್ದವಾಗಿ ಚಾಚಿ ನಿಂತ ಮರದ ಬೇಲಿಗೆ ಬಣ್ಣ ಬಳಿಯುವ ಕೆಲಸವಿದೆ. ಅವನು ಉದ್ದುದಕ್ಕೆ ಬಣ್ಣ ಹೊಡೆಯುತ್ತಿದ್ದಂತೆ ಅವನ ಓರಗೆಯ ದಾರಿಹೋಕ ಹುಡುಗರು ಬಂದು ಅವನ ಕೆಲಸದ ಬಗ್ಗೆ ಮರುಗುತ್ತಾರೆ. ಟಾಮ್‌ಗೆ ಒಳಗೊಳಗೇ ಅಸಮಾಧಾನ. `ಕೆಲಸದಲ್ಲಿ ಸ್ವಲ್ಪ ಕೈಜೋಡಿಸಿ` ಎಂದರೆ ಆ ಹುಡುಗರು ಕೈ ಜೋಡಿಸಲೊಲ್ಲರು!
ಟಾಮ್ ಒಂದು ಉಪಾಯ ಹುಡುಕುತ್ತಾನೆ. ದಾರಿಹೋಕ ಹುಡುಗನೊಬ್ಬನಿಗೆ ತನ್ನ ಕೆಲಸವನ್ನು ಗಿಲೀಟು ಮಾತುಗಳಲ್ಲಿ ವರ್ಣಿಸುತ್ತಾನೆ. `ತಾನು ಮಾಡುತ್ತಿರುವ ಈ ಕೆಲಸವೇ ತನಗೆ ಅಲಂಕಾರ, ಈ ಬಣ್ಣ ಬಳಿಯುವ ಕೆಲಸ ತನ್ನಂಥ ದೈವಾಂಶ ಸಂಭೂತನಿಂದಷ್ಟೇ ಆಗಬೇಕು` ಎನ್ನುತ್ತಾನೆ. ಟಾಮ್‌ನ ಖೆಡ್ಡಾಕ್ಕೆ ಹುಡುಗ ಬೀಳುತ್ತಾನೆ. ಮೊದಲಿಗೆ ಟಾಮ್‌ನನ್ನು ತಮಾಷೆ ಮಾಡಿದ ಅದೇ ಹುಡುಗ ಈಗ- `ನನಗೂ ಒಮ್ಮೆ ಬ್ರಶ್ ಕೊಡೋ` ಎನ್ನುತ್ತಾನೆ. `ಇಲ್ಲಪ್ಪ, ಇದನ್ನು ಯಾರ್ಯಾರೋ ಮಾಡುವ ಹಾಗಿಲ್ಲ, ಸಾವಿರಕ್ಕೊಬ್ಬರು ಮಾಡಬಹುದಷ್ಟೇ` ಎನ್ನುವುದು ಟಾಮ್ ಮಸಾಲೆ. ಆಮೇಲೆ, ಕನಿಕರ ತೋರುವವನಂತೆ `ಹೋಗಲಿ, ಸ್ವಲ್ಪ ಬಳಿದುಕೋ` ಎಂದು ಬ್ರಶ್ ಕೊಡುತ್ತಾನೆ. ಹೀಗೆ, ಒಬ್ಬೊಬ್ಬರಾಗಿ ದಾರಿಹೋಕ ಹುಡುಗರೆಲ್ಲರೂ ಟಾಮ್‌ನ ಬಲೆಗೆ ಬೀಳುತ್ತಾರೆ. ಟಾಮ್‌ನ ರಂಗುರಂಗಿನ ಮಾತುಗಳಿಗೆ ಬಲಿ ಬಿದ್ದ ಆ ಹುಡುಗರು ಅವನಿಗೆ ಭಕ್ಷೀಸಾಗಿ ಆಟದ ಸಾಮಾನುಗಳನ್ನು ಬೇರೆ ಕೊಡುತ್ತಾರೆ! ಇದು ಮಾರ್ಕ್ ಟ್ವೈನ್ ಅವರ `ಟಾಮ್ ಸಾಯರ್ ಮತ್ತು ಬೇಲಿ` ಕಥೆಯ ಸಾರಾಂಶ.
ಉದ್ದಿಮೆಗಳಿಗೆ ಅನಿವಾರ್ಯವಾಗಿ ಬೇಕಾದ `ಮಾನವ ಶಕ್ತಿ`ಯನ್ನು ಇಂದು ಹೊಸ ಯುಗದ ಟಾಮ್‌ಗಳು `ಉದ್ಯೋಗ ಸೃಷ್ಟಿ` ಎಂದು ಕರೆಯುತ್ತಾರೆ! ದೊಡ್ಡ ವೇದಿಕೆಗಳ ಮೇಲೆ ನಿಂತು, ರಾಜಕಾರಣಿಗಳೊಂದಿಗೆ ಕೈಗೂಡಿಸಿ ತಮ್ಮನ್ನು ತಾವು `ನಿರುದ್ಯೋಗ` ಹೋಗಲಾಡಿಸುವ ಹರಿಕಾರರಂತೆ ಗುರುತಿಸಿಕೊಳ್ಳುತ್ತಾರೆ. ಆದರೆ, ನಿಜವಾಗಿ ನೋಡಿದರೆ ಇವರಿಗೆಲ್ಲ ಮಾನವ ಶ್ರಮ ಅನಿವಾರ್ಯ ಕರ್ಮವೇ ಹೊರತು ಅವರು ಸಮಾಜಕ್ಕೆ ಮಾಡುವ ಔದಾರ್ಯವಲ್ಲ (್ಞಛ್ಚಿಛಿಚ್ಟ ಛಿಜ್ಝಿ). ಹೊರದೇಶದ ಎಲ್ಲ ಉದ್ದಿಮೆಗಳು ಇಂದು ಮೂರನೆಯ ಜಗತ್ತಿನ ದೇಶಗಳಿಗೆ ರವಾನೆಗೊಳ್ಳುತ್ತಿವೆ. ರಾಶಿಗಟ್ಟಲೆ ಕಚ್ಚಾ ವಸ್ತುಗಳನ್ನು ಬೇಡುವ, ಮಾನವ ಶಕ್ತಿಯನ್ನು ಬಯಸುವ, ಉತ್ಪಾದನೆಯ ಉಪ-ಉತ್ಪನ್ನವಾಗಿ ಪರಿಸರಕ್ಕೆ ದೂಳು, ಹೊಗೆ, ಕಸ ಮತ್ತು ವಿಷಗಳನ್ನು ಉಗುಳುವ ಸಾವಿರಗಟ್ಟಲೆ ಉದ್ಯಮಗಳು ಇಂದು ಭಾರತ, ಚೀನಾ, ಬಾಂಗ್ಲಾದಂತಹ ಮೂರನೆಯ ಜಗತ್ತಿನ ದೇಶಗಳಲ್ಲಿ ಸ್ಥಾಪನೆಯಾಗುತ್ತಿವೆ. ಇಲ್ಲಿ ತಯಾರಾದ ಉತ್ಪನ್ನಗಳು ಇಡೀ ವಿಶ್ವಕ್ಕೆ ರಫ್ತಾಗುತ್ತವೆ.
ಲಂಡನ್‌ನ ಬೀದಿಗಳಲ್ಲಿ ಮಾರಾಟಗೊಳ್ಳುವ- `I Love London ಎಂದು ಬರೆದಿರುವ- ಕಪ್ಪು ಸಾಸರುಗಳ ಅಡಿಯಲ್ಲಿ `Made in China` ಎಂದು ಬರೆದಿರುವುದು ವಿಪರ್ಯಾಸವಲ್ಲದೆ ಮತ್ತೇನು?
ವಿಪರ್ಯಾಸ ಮತ್ತೂ ಇದೆ. ಉತ್ಪನ್ನಗಳು ತಯಾರಾಗುವ ದೇಶದ ಪರಿಸರ, ಅಲ್ಲಿಯ ಜನರ ಆರೋಗ್ಯ-ಸಂಸ್ಕೃತಿ, ಜನಜೀವನದ ಮೇಲಾಗುವ ಪರಿಣಾಮಗಳೊಂದಕ್ಕೂ ಖರ್ಚಿನ ಲೆಕ್ಕ ಹಿಡಿಯದೆ, ಬರಿಯ ತಯಾರಿಕೆಯ ಖರ್ಚಿನ ಆಧಾರದಲ್ಲಿ ಕಡಿಮೆ ಬೆಲೆಗೆ ಮಾರಲಾಗುವ ಈ ಸಾಮಾನುಗಳ ನಿಜವಾದ ಮೌಲ್ಯ ತೆರುತ್ತಿರುವುದು ಇವುಗಳು ತಯಾರಾಗುವ ಭಾರತ ಮತ್ತು ನೆರೆಯ ದೇಶಗಳು. ಈ ಘನ ಉತ್ಪನ್ನಗಳದೊಂದು ಕಥೆಯಾದರೆ `ಸಾಫ್ಟ್‌ವೇರ್`ನಂತಹ ಡಿಜಿಟಲ್ ಉತ್ಪನ್ನಗಳದ್ದು ಇನ್ನೊಂದು ಕಥೆ.
ಸಂಪೂರ್ಣ ಹೊರಗುತ್ತಿಗೆಯ ಮೇಲೆ ನಡೆಯುವ ಈ ವಹಿವಾಟಿನಲ್ಲಿ ಉತ್ಪನ್ನಗಳು ಹೆಚ್ಚೂಕಮ್ಮಿ ಸಂಪೂರ್ಣವಾಗಿ ಹೊರದೇಶಗಳಿಗೆ ರವಾನೆಗೊಳ್ಳುತ್ತವೆ, ಕೆಲಸ ಮಾತ್ರ ನಮ್ಮದು! (ಅಂದಹಾಗೆ ನಾನೂ ಒಬ್ಬ ಸಾಫ್ಟ್‌ವೇರಿಗ). ಅಂದರೆ, ನಮಗೆ `ಉದ್ಯೋಗ ಸೃಷ್ಟಿಯೊಂದೇ ಲಾಭ ಎಂದ ಹಾಗಾಯಿತು. ಮಾನವ ಶ್ರಮವನ್ನು `ಮಾರುವ` ಈ ಸಂಸ್ಕೃತಿಗೆ `ಬಾಡಿ ಶಾಪಿಂಗ್` ಎನ್ನುವ ಹೆಸರೂ ಇದೆ.
ಖರ್ಚು ಕಡಿತಗೊಳಿಸಬೇಕಾದ ಕಂಪನಿಗಳು ಭಾರತದ ಸೇವಾ ಗುತ್ತಿಗೆದಾರನೊಬ್ಬನನ್ನು ಆರಿಸಿ ತಮ್ಮ ಕೆಲಸವನ್ನೆಲ್ಲ ಇಲ್ಲಿಗೆ ರವಾನಿಸಿಬಿಡುತ್ತವೆ. ನಮಗೆ ಕೈತುಂಬಾ ಕೆಲಸ, ಸಂಬಳ. ನಾಯಿಕೊಡೆಗಳಂತೆ ಸಣ್ಣ ಸಣ್ಣ ಊರುಗಳಲ್ಲಿ ತಲೆಯೆತ್ತುತ್ತಿರುವ ಕಂಪನಿಗಳಿಗೆ ನೀರು, ವಿದ್ಯುತ್, ಬಹುಮಹಡಿ ಕಟ್ಟಡ ಸಾಮಾಗ್ರಿಗಳು, ಕಂಪ್ಯೂಟರುಗಳು ಎಲ್ಲಿಂದ ಬರುತ್ತವೆ? ಈ ಪ್ರಕ್ರಿಯೆಯಲ್ಲಿ ನಾವು ಸೃಷ್ಟಿ ಮಾಡುವ ಹೊಸ ನಗರಗಳಿಗೆ, ನಗರ ತ್ಯಾಜ್ಯಗಳಿಗೆ ಯಾರು ಹೊಣೆ?
ಮೇಲಿನ ಕಥೆಗೂ ನಮ್ಮ ಜಾಗತೀಕೃತ ಭಾರತದ ಪರಿಸ್ಥಿತಿಗೂ ಈಗ ನಿಮಗೆ ಹೋಲಿಕೆ ಕಾಣಿಸುತ್ತಿರಬಹುದು. ಇಲ್ಲಿ ಒಂದೇ ವ್ಯತ್ಯಾಸವೆಂದರೆ ಟಾಮ್ ಯಾರಿಗೂ ದುಡ್ಡು ಕೊಟ್ಟಿರಲಿಲ್ಲ. ಆದರೆ ನಮಗೆ ಕೈತುಂಬಾ ಹಣ ಸಿಗುತ್ತಿದೆ. ಅಂದಹಾಗೆ, ನಾವು ಕಳೆದುಕೊಳ್ಳುತ್ತಿರುವ ಸಂಪತ್ತಿಗೂ, ಪಡೆಯುತ್ತಿರುವ ಹಣಕ್ಕೂ ತಾಳಮೇಳ ಇದೆಯೇ?
ಕೃಷಿಯಂತಹ ಸಣ್ಣಮಟ್ಟದ ಉದ್ಯಮದಿಂದ ಮೊದಲ್ಗೊಂಡು ಕೈಗಾರಿಕೆಗಳವರೆಗೆ ಯಾವುದೇ ಉದ್ಯಮವಾದರೂ `ಕಡಿಮೆ ಕೆಲಸಗಾರರನ್ನು ಬಳಸಿ, ಅಗತ್ಯವಿದ್ದಷ್ಟೇ ಸಂಬಳ ನೀಡಿ ಸಾಧ್ಯವಾದಷ್ಟೂ ಅಧಿಕ ಲಾಭ ಗಳಿಸಲು` ಪ್ರಯತ್ನಿಸುತ್ತವೆ ಮತ್ತು ಅದು ಸಹಜ ಕೂಡ. ಆದರೆ ನಮ್ಮ ಉದ್ಯಮಿಗಳು ಮತ್ತು ರಾಜಕಾರಣಿಗಳು ಕಥೆಯ (ಖಳ)ನಾಯಕ ಟಾಮ್‌ನಂತೆ ಬಣ್ಣದ ಮಾತುಗಳನ್ನು ಹೇಳುತ್ತಾರೆ ಮತ್ತು ಅದನ್ನು ನಾವು ನಂಬಿ ಅವರಿಗಾಗಿ ದುಡಿಯುತ್ತೇವೆ, ನಮ್ಮ ಅಮೂಲ್ಯ ಸಂಪತ್ತುಗಳನ್ನು ಅವರಿಗೇ ನೀಡಿ ಕೃತಾರ್ಥರಾಗುತ್ತಿದ್ದೇವೆ. ನಾನು ಕೆಲಸ ಮಾಡುತ್ತಿರುವ ಬಹುದೊಡ್ಡ ಕಂಪನಿಯ ದೊಡ್ಡ ಅಧಿಕಾರಿಯೊಬ್ಬರು ಕಂಪನಿಯೊಳಗಿನ ಸಭೆಯೊಂದರಲ್ಲಿ- `ಕಡಿಮೆ ಉದ್ಯೋಗಿಗಳಿಂದ ಹೆಚ್ಚು ಲಾಭ ಗಳಿಸುವತ್ತ ನಾವು ಹೊರಟಿದ್ದೇವೆ` ಎಂದು ಸತ್ಯವನ್ನೇ ಹೇಳಿಕೊಂಡರು. ಇದು ಜನರಿಗೆ `ಉದ್ಯೋಗ ಸೃಷ್ಟಿ`ಯ ಭಿಕ್ಷೆಗಾಗಿ ಸರಕಾರದಿಂದ ವಿದ್ಯುತ್, ನೀರು ಮತ್ತು ನೂರಾರು ಎಕರೆ ಜಮೀನುಗಳನ್ನು ಕಡಿಮೆ ಬೆಲೆಯಲ್ಲಿ ಪಡೆದ ಕಂಪನಿಗಳು ಒಳಗಿಂದೊಳಗೇ ಹೇಳುವ ಮಾತು.!
ಭಾರತದೆಲ್ಲೆಡೆ ಇಂದು 584 ಎಸ್.ಇ.ಜಡ್‌ಗಳು ಪರವಾನಗಿ ಪಡೆಯುವ ಹಾದಿಯಲ್ಲಿವೆ. ಅವುಗಳಲ್ಲಿ 154ರಷ್ಟು ಆಗಲೇ ಸಂಪೂರ್ಣ ತಾತ್ವಿಕ ಒಪ್ಪಿಗೆ ಪಡೆದಿವೆ. ಜಮೀನುದಾರಿ ಪದ್ಧತಿ ಕೊನೆಗೊಂಡು ಹೊಲದ ಒಡೆಯರಾಗಿದ್ದ ಕೃಷಿಕರು ಇಂದು ಹೊಸದೊಂದು ಜಮೀನುಬಾಕ ಪದ್ಧತಿಗಾಗಿ ತಮ್ಮ ಭೂಮಿಯನ್ನು ಕಳೆದುಕೊಳ್ಳುತ್ತಿದ್ದಾರೆ. `ನನಗೆ ಕೃಷಿಯೊಂದು ಬಿಟ್ಟರೆ ಬೇರೇನೂ ಗೊತ್ತಿಲ್ಲ, ನೀವು ಪರಿಹಾರವಾಗಿ ಕೊಡುವ ನೋಟಿನ ಕಂತೆಗಳು ನನಗೆ ಬೇಕಿಲ್ಲ` ಎಂದು ದಯನೀಯವಾಗಿ ಗೋಗರೆವ ಗ್ರೆಗರಿ ಪತ್ರಾವೋ ಅಂಥವರ ಕೂಗು ಅರಣ್ಯರೋದನ ಆಗಿದೆ. ಭೂನಾಶಕ ಯಂತ್ರಗಳು ಅವರ ಮನೆ ಮಠಗಳನ್ನು ಬಲವಂತವಾಗಿ ನೆಲಸಮ ಮಾಡಿವೆ. ಕೈಗಾರಿಕೆಗಳಿಗಾಗಿ ಕೃಷಿಭೂಮಿಯನ್ನು ವಶಪಡಿಸುವ ವ್ಯವಸ್ಥೆಯೊಂದು ನಮ್ಮಲ್ಲಿದೆ. ಆದರೆ ಕೃಷಿ ಭೂಮಿಗಾಗಿ ಕೈಗಾರಿಕೆಗಳಿಂದ ಭೂಮಿ ವಶಪಡಿಸುವ ವ್ಯವಸ್ಥೆ ನಮ್ಮಲ್ಲಿದೆಯೇ?
ಇಂದು ಪ್ರಪಂಚದ ಬಹಳಷ್ಟು ಭಾಗಕ್ಕೆ ಸೇವೆ ಪೂರೈಸುವವರು ನಾವೇ ಆದ್ದರಿಂದ ನಮ್ಮಲ್ಲಿ ದುಡ್ಡಿನ ಸಮೃದ್ಧಿ ಇದೆ. ಇದನ್ನು ಅಧುನಿಕ ಅರ್ಥಶಾಸ್ತ್ರ `ಅಭಿವೃದ್ಧಿ` ಎಂದು ಕರೆಯುತ್ತದೆ. ಹಣ ತನ್ನ ಹೆಸರಿಗೆ ತಕ್ಕಂತೆ (ಕರೆನ್ಸಿ, ಕರೆಂಟ್=ಹರಿವು, ಪ್ರವಾಹ) ನಿಂತಲ್ಲಿ ನಿಲ್ಲದೆ ಹರಿಯಲು ಬಯಸುತ್ತದೆ. ಉತ್ಪಾದಕ ವರ್ಗ, ಹಣದ ವಾರಸುದಾರರನ್ನು ಖರೀದಿಸಲು ಪ್ರಚೋದಿಸುತ್ತದೆ. ಇಂದು ನಾವು ಖರೀದಿಸುವ ವಸ್ತುಗಳು ಬಳಸಿ ಬಿಸಾಡುವಂತೆ ವಿನ್ಯಾಸಗೊಂಡಿವೆ. ಇಡಿಯ ಆರ್ಥಿಕತೆ, ಕೊಂಡು- ಬಳಸಿ- ಬಿಸಾಡಿ, ಇನ್ನೊಂದನ್ನು ಕೊಳ್ಳಲು ಪ್ರೋತ್ಸಾಹಿಸುತ್ತದೆ. ಆದರೆ ಇವೆಲ್ಲಕ್ಕೆ ಅಸ್ತಿಭಾರವಾದ ಪ್ರಾಕೃತಿಕ ಸಂಪನ್ಮೂಲಗಳು ಎಷ್ಟಿದ್ದವೋ ಅಷ್ಟೇ ಇವೆ. ಹಣ ಎನ್ನುವುದು ನಮಗೊಂದು ಭ್ರಾಮಕ ಸಮೃದ್ಧಿ ತಂದುಕೊಟ್ಟಿದೆ. ಇದರಲ್ಲಿ ಮೈಮರೆತ ನಾವು ನಿಜ ಸಮೃದ್ಧಿಯ ಪ್ರತೀಕಗಳಾದ ನಮ್ಮ ನೆಲ, ಜಲ, ಅರಣ್ಯಗಳನ್ನು ಎಂದೋ ಮರೆತುಬಿಟ್ಟಿದ್ದೇವೆ.
ಕೊನೆಯ ಮರ ಧರಾಶಾಹಿಯಾಗಲು ಇನ್ನು ಎಷ್ಟು ಹೊತ್ತು ಉಳಿದಿದೆ?
***
ನಾವು ಮನೆಯಲ್ಲಿ ಮಸಾಲೆ ದೋಸೆ ಮಾಡಿ ತಿನ್ನಲು ಬಯಸಿದ್ದೇವೆ ಎಂದು ಇಟ್ಟುಕೊಳ್ಳೋಣ. ನಮ್ಮ ಗುರಿ ಮಸಾಲೆ ದೋಸೆ `ತಿನ್ನುವುದು`. ದೋಸೆಗೆ ಹಿಟ್ಟು ರುಬ್ಬುವುದು, ಆಲೂಗಡ್ಡೆ ಪಲ್ಯ ಮಾಡುವುದೆಲ್ಲ ಮಸಾಲೆ ದೋಸೆ ತಿನ್ನುವುದೆಂಬ ಗುರಿ ಸಾಧನೆಗೆ ಮಾಡಲೇಬೇಕಾದ ಅನಿವಾರ್ಯ ಕೆಲಸಗಳು. ಈಗ ಯಾರಾದರೂ ಮಸಾಲೆ ದೋಸೆಯನ್ನು `ತಯಾರಿಸುವುದೇ` ನಮ್ಮ ಗುರಿ ಹೊರತು ತಿನ್ನುವುದಲ್ಲ, `ಉದ್ಯೋಗ ಸೃಷ್ಟಿ`ಯೇ ಗುರಿ ಹೊರತು `ಅದರಿಂದ ತಯಾರಾಗುವ ಉತ್ಪನ್ನಗಳಲ್ಲ` ಎಂದರೆ ನಾವು ನಂಬಬಹುದೇ?
ಅಂದರೆ...ಅಕ್ಕಿ ನಮ್ಮದು. ಹಿಟ್ಟು ತಯಾರಿಸಿ, ನಮ್ಮ ಕಾಡುಗಳನ್ನು ಕಡಿದು ಒಲೆ ಉರಿಸಿ ನಮ್ಮ ಕೈಯಿಂದಲೇ ದೋಸೆ ತಯಾರಿಸಿ ತಿನ್ನುತ್ತಿರುವ ಟಾಮ್‌ಗಳು ಇರುವುದೂ, ಅವರು ಸೊಕ್ಕಿ ಬೆಳೆವಂತಹ ವ್ಯವಸ್ಥೆಯೊಂದು ನಿರ್ಮಾಣ ಆಗಿರುವುದೂ, ಅದರಲ್ಲಿ ನನ್ನನ್ನೂ ಸೇರಿ ಭಾರತದ ಯುವಶಕ್ತಿಯ ಮುಕ್ಕಾಲು ಭಾಗಕ್ಕೂ ಹೆಚ್ಚು ಜನರು ಸೇವಕರಾಗುತ್ತಿರುವುದು ಒಂದು ದುರಂತಮಯ ಅದ್ಭುತ!
ನಮ್ಮದೇ ರಕ್ತಮಾಂಸಗಳನ್ನು ದಹಿಸಿ ಪರ ಊರನ್ನು ಉದ್ಧಾರ ಮಾಡುವ ಅಗತ್ಯ ನಮಗೇನಿದೆ? ನಮ್ಮೂರಿನ, ನಮ್ಮ ದೇಶದ ಕೆಲಸಗಳನ್ನು ಯಾರು ಮಾಡುವುದು? ನಮ್ಮ ಊಟಕ್ಕೆ ಬೆಳೆ ಯಾರು ಬೆಳೆಯುವುದು?
No comments:
Post a Comment