Monday, June 27, 2011

ನಮ್ಮ ಮನಸ್ತಿತಿ ಇಂದು ಏನಾಗಿದೆ? - A thought provoking conversation.

 ನಮ್ಮೆಲ್ಲ ಕ್ರಿಯೆಗಳಿಗೂ ಚಟುವಟಿಕೆಗಳಿಗೂ ಒಂದು ಉದ್ದೇಶವಿರಲೇಬೇಕು, ಪ್ರಯೋಜನವಿರಲೇಬೇಕು, ಇಲ್ಲದಿದ್ದರೆ ಅದು ನಿಷ್ಪ್ರಯೋಜಕ ಎಂದು ನಾವು ನಂಬಿದಂತಿದೆ. ಹಕ್ಕಿ ಹಾರುವುದನ್ನು, ನದಿ ಹರಿಯುವುದನ್ನು, ಸೂರ‌್ಯ ಮುಳುಗುವುದನ್ನು, ನಕ್ಷತ್ರ ಮಿನುಗುವುದನ್ನು, ಅರಳಿದ ಹೂವನ್ನು, ಮಗುವಿನ ಮಂದಹಾಸವನ್ನು, ಹೆಣ್ಣಿನ ಕಣ್ಣಂಚಿನ ನೋಟವನ್ನು ಅನುಭವಿಸುವ, ಸಂತೋಷಪಡುವ ಮನಸ್ಸನ್ನು ನಾವು ಕಳೆದುಕೊಂಡುಬಿಟ್ಟರೆ, ಇವುಗಳಿಂದೆಲ್ಲ ಏನು ಪ್ರಯೋಜನ ಎಂದು ಲೆಕ್ಕಾಚಾರ ಹಾಕಿದರೆ ಬದುಕಿಗೆ ಅರ್ಥವೇನು? ನಾವೀಗ ಆ ಸ್ಥಿತಿಯಲ್ಲಿದ್ದೇವೆಯೇ?

ಶ್ರಮ ಸಂಸ್ಕೃತಿಯ ನಿರಾಕರಣೆಯ ನೆಲೆಯ್ಲ್ಲಲಿ ನಮ್ಮ `ಸುಖ~ದ ಪರಿಕಲ್ಪನೆ ರೂಪುಗೊಳ್ಳುತ್ತಿದೆ. ನಾವು ಮಾಡುವ ಪ್ರತಿಯೊಂದು ಕೆಲಸದಲ್ಲೂ ಈಗ ಲೆಕ್ಕಾಚಾರ. ಈ ಕೆಲಸ ಮಾಡಿದರೆ ಅದರಿಂದ ನನಗೆ ಯಾವ ಬಗೆಯ ಪ್ರಯೋಜನ ಇತ್ಯಾದಿ ಸಂಗತಿಗಳನ್ನು ಮನಸ್ಸಿನಲ್ಲಿ ತುಂಬಿಕೊಂಡೇ ನಾವು ಕ್ರಿಯಾಶೀಲರಾಗುತ್ತೇವೆ. ಹೀಗಾಗಿಯೇ ಸದಾ ಎಚ್ಚರದ ಮನೋಭಾವ. ಯಾವುದರಲ್ಲೂ ತನ್ಮಯವಾಗಲು, ಲೀನವಾಗಲು ಸಾಧ್ಯವಾಗದ ಸ್ಥಿತಿ.
  
ಬಾಳೆಹಣ್ಣು ಜೀರ್ಣಕಾರಿ
ಕಿತ್ತಲೆ ಪುಷ್ಟಿದಾಯಕ
ಮಾವಿನ ಹಣ್ಣಲ್ಲಿದೆ ಪ್ರೊಟೀನು
ಕಲ್ಲಂಗಡಿ ರಕ್ತವರ್ಧಕ
ನೇರಲೆ ಹಣ್ಣಲ್ಲಿದೆ ಅಯೋಡಿನ್ನು
ಹಲಸಿನಲ್ಲಿದೆ ಫೈಬರ‌್ರು
ಪರಂಗಿ ಹಣ್ಣಲ್ಲಿದೆ ಖನಿಜಾಂಶ
ದ್ರಾಕ್ಷಿಯಲ್ಲಿ ಗ್ಲುಕೋಸು
ಕರಬೂಜದಲ್ಲಿದೆ ಕಾರ್ಬೊಹೈಡ್ರೇಟು
ಸೇಬು ತಿಂದರೆ ನಿರೋಗ..

ಅದು ಸರಿ, ಕೇವಲ ರುಚಿಗೆಂದೇ ಹಣ್ಣು ಸವಿಯುವುದು ಯಾವಾಗ?

ನಮ್ಮ ಯೋಚನಾ ಲಹರಿ ನೋಡಿ ಹೀಗೆ ಸಾಗಿದೆ ಎಂದು, ಲಾಭವಿಲ್ಲದೆ ನಾವು ಏನನ್ನು ಮಾಡಲು ಮುಂದುವರಿಯುತಿಲ್ಲ. ಅಕಸ್ಮಾತ್ ನಾವು ಮಾಡಿದರೆ ಅದು ನಮಗೆ ಬೋರ್ ಹೊಡಿಸುತ್ತದೆ..

ಕೈಯಲ್ಲಿ ರಿಮೋಟ್ ಹಿಡಿದು ಟಿ.ವಿ. ಮುಂದೆ ಕುಳಿತ ಯಾವ ಹುಡುಗ ಹುಡುಗಿಯನ್ನಾದರೂ ಗಮನಿಸಿ. ಪ್ರತಿ ನಿಮಿಷವೂ ಚಾನೆಲ್ ಬದಲಾಗುತ್ತಿರುತ್ತದೆ. ಒಂದೇ ಕಡೆ ಅವರ ಮನಸ್ಸು ನೆಲೆನಿಂತಿರುವುದಿಲ್ಲ. ಕೈಯಲ್ಲಿ ರಿಮೋಟ್ ಇರುವುದರಿಂದ ಈ ರೀತಿಯ ಚಂಚಲತೆ ಎಂಬುದು ಸರಳ ತೀರ್ಮಾನ.

ಯಾವುದರಲ್ಲೂ ತಮ್ಮನ್ನು ಇಡಿಯಾಗಿ ತೊಡಗಿಸಿಕೊಳ್ಳಲಾಗದ ಮನಃಸ್ಥಿತಿ ಅವರದು. ತನ್ಮಯತೆ ಸಾಧ್ಯವಾಗದ ಗೊಂದಲದ ಚಡಪಡಿಕೆಯ ಮನೋಭಾವ.

ಇದೊಂದು ಸಣ್ಣ ನಿದರ್ಶನ ಅಷ್ಟೆ. ಸಮಾಜದ ಎಲ್ಲ ರಂಗಗಳಲ್ಲಿಯೂ ನಾವು ಇದೇ ಸ್ಥಿತಿಯನ್ನು ಕಾಣುತ್ತಿದ್ದೇವೆ. ತರಗತಿಯಲ್ಲಿ ಕುಳಿತ ವಿದ್ಯಾರ್ಥಿಗಳು ಒಂದು ಗಂಟೆ ಪಾಠ ಕೇಳಿಸಿಕೊಳ್ಳಲು ಕಷ್ಟಪಡುತ್ತಾರೆ. ಎಷ್ಟೇ ಒಳ್ಳೆಯ ಅಧ್ಯಾಪಕರು ಪಾಠ ಮಾಡುತ್ತಿದ್ದರೂ ಒಂದು ಗಂಟೆ ಮೀರಿದರೆ ಹಿಂಸೆ ಅನುಭವಿಸುತ್ತಿರುವಂತೆ ಕುಳಿತಲ್ಲೇ ಒದ್ದಾಡುತ್ತಾರೆ. ಅಧ್ಯಾಪಕರಿಗೆ ಗೊತ್ತಾಗದಂತೆ ಮೊಬೈಲ್‌ಗಳಲ್ಲಿ ಆಟವಾಡುತ್ತಿರುತ್ತಾರೆ.

ಸಭೆ ಸಮಾರಂಭಗಳಲ್ಲಿಯೂ ಇದೇ ಚಿತ್ರ. ಸಭೆ ಕೊಂಚ ದೀರ್ಘವಾಯಿತು ಎಂದಾಕ್ಷಣ ಸಭಿಕರು ಮಾತ್ರವಲ್ಲ, ವೇದಿಕೆಯ ಮೇಲಿರುವವರೂ ಅಸ್ವಸ್ಥರಾಗುತ್ತಾರೆ. ಹೇಳುತ್ತಿರುವವರು ಎಷ್ಟೇ ಗಣ್ಯ ವ್ಯಕ್ತಿಯಾಗಿರಲಿ, ಹೇಳುತ್ತಿರುವ ವಿಷಯ ಎಷ್ಟೇ ಮಹತ್ವದ್ದಿರಲಿ, ಕೇಳಿಸಿಕೊಳ್ಳುವ ತಾಳ್ಮೆ ಇರುವುದಿಲ್ಲ. ತಮ್ಮ ತಮ್ಮಲ್ಲೇ ಮಾತುಕತೆ, ಹೊರಗೆ ನಿಂತು ಹರಟೆ.

ಹಬ್ಬ ಮದುವೆಯಂಥ ಸಂಭ್ರಮಗಳಲ್ಲಿಯೂ ಪರಿಸ್ಥಿತಿ ಭಿನ್ನವೇನಲ್ಲ. ಹಾಜರಿ ಹಾಕುವುದು ಮುಖ್ಯವೇ ಹೊರತು, ಅದರಲ್ಲಿ ಒಂದಾಗಿ ಪಾಲ್ಗೊಳ್ಳುವುದು ನಮಗೆ ಸಾಧ್ಯವಾಗುತ್ತಿಲ್ಲ. ಆತ್ಮೀಯ ಗೆಳೆಯರ ಮನೆಯ ಕಾರ‌್ಯಕ್ರಮವಿರಲಿ, ಬಂಧುಗಳ ಮನೆಯ ಸಮಾರಂಭವಿರಲಿ ನಾವು ಹೊರಗಿನವರೆಂದೇ ಅನ್ನಿಸುತ್ತಿರುತ್ತದೆ. ಹೀಗಾಗಿಯೇ ಅಲ್ಲಿ ನಮಗೆ ಸಮಯ ಪರೀಕ್ಷೆ. ಇರಲಾಗದ ಹೋಗಲೂ ಆಗದ ದ್ವಂದ್ವ. ಫೋಟೋ session ಅಲ್ಲಿ ಮುಖ್ಯವಾಗುತ್ತದೆ ಹೊರತು ಬಂದ ನೆಂಟರಿಷ್ಟರಲ್ಲ.

ಈವೆಂಟ್ ಮ್ಯಾನೇಜ್‌ಮೆಂಟ್ ಅಂತ ಈಗ ಹೊಸ ಸಂಸ್ಥೆಗಳು ಇವೆ ಯಾವುದೇ ಕಾರ‌್ಯಕ್ರಮ ಆಗಬೇಕಾದರೂ ಅವರಿಗೆ ಹೇಳಿಬಿಟ್ಟರೆ ಸಾಕು, ಅವರು ವ್ಯವಸ್ಥೆ ಮಾಡಿಕೊಡುತ್ತಾರೆ. ನಮಗೆ ಯಾವ ರೀತಿಯ ಟೆನ್ಷನ್ ಇರುವುದಿಲ್ಲ, ಛತ್ರ ಅವರೇಹುಡುಕಿಕೊಡುತ್ತಾರೆ, ಆಹ್ವಾನಪತ್ರಿಕೆ  ಪ್ರಿಂಟ್‌ಮಾಡಿಸಿ ಕೊಡುತ್ತಾರೆ, ಪರ್ಚೇಸ್ ಬೇಕಿದ್ದರೆ ನೀನು ಮಾಡಬಹುದು, ಇಲ್ಲ ಅವರೇ ಕರೆದುಕೊಂಡು ಹೋಗಿ ನಿನಗೆ ಬೇಕಾದ್ದು ಕೊಡಿಸುತ್ತಾರೆ. ಅಡುಗೆಯವರು, ಓಲಗದವರು, ಪುರೋಹಿತರು, ಮೊದಲ ರಾತ್ರಿಯ ವ್ಯವಸ್ಥೆ, ಹನಿಮೂನ್ ಪ್ಯಾಕೇಜ್- ಎಲ್ಲ ಅವರದೇ ಜವಾಬ್ದಾರಿ. ಬಂದವರಿಗೆ ಕೊಡುವ ಗಿಫ್ಟ್ ಸಹ ಅವರೇ ಪ್ಯಾಕ್ ಮಾಡಿಸಿ ರೆಡಿಯಾಗಿಟ್ಟಿರುತ್ತಾರೆ. ಆಹ್ವಾನ ಪತ್ರಿಕೆ ಅದನ್ನು ಅವರೇ ಮಾಡುತ್ತಾರೆ ಬೇಕಾದರೆ ದಂಪತಿಗಳಿಬ್ಬರು ಅಕ್ಷತೆ, ಕುಂಕುಮದ ಜೊತೆಗೆ ಎಲ್ಲರ ಮನೆಗೆ ಹೋಗಿ ಶಾಸ್ತ್ರೋಕ್ತವಾಗಿ ಕರೆಯತ್ತಾರೆ. ನಾವು  ಲಿಸ್ಟ್ ಕೊಟ್ಟರಾಯಿತು. ನಮ್ಮ ಮನೆಗೆ ಬರುತ್ತಾರೆ. ಮದುವೆಯ ಹಿಂದಿನ ದಿನ ಎಲ್ಲರಿಗೂ ಮೆಸೇಜ್ ಮಾಡುತ್ತಾರೆ. ಇದು ಹೊಸ ಟ್ರೆಂಡ್~. ಮತ್ತಿನ್ನೇನು? ನಮ್ಮ ಪಾತ್ರ?? 

ದುಡ್ಡು ಕೊಡುವುದಷ್ಟೇ! 

ಅದೇ ಹಿಂದಿನ ಮದುವೆಗಳೆಂದರೆ ಒಂದು ತಿಂಗಳ ಮುಂಚಿನಿಂದಲೂ ಮನೆಯಲ್ಲಿ ಸಂಭ್ರಮವೋ ಸಂಭ್ರಮ. ಮನೆ ತುಂಬ ನೆಂಟರು. ಅಮ್ಮನ ಗಡಿಬಿಡಿ, ಅಪ್ಪನ ಕೂಗಾಟ, ಬಂಧುಗಳ ಸಡಗರದ ಓಡಾಟ. ರಾತ್ರಿ ಬಹುಹೊತ್ತಿನ ತನಕ ಹರಟೆ. ಮಾಡಿದಷ್ಟೂ ಮುಗಿಯದ ಕೆಲಸಗಳು. ಕಡೇ ಗಳಿಗೆಯ ಗೊಂದಲಗಳು. ಅದೊಂದು ಮಧುರ ನೆನಪು!

ಇನ್ನು ಹಬ್ಬಗಳು, ಗೌರಿಗಣೇಶನ ಹಬ್ಬದಲ್ಲಿ ಸಾಮಾನ್ಯವಾಗಿ ನಾವೆಲ್ಲರೂ ಹಿಂದಿನ ದಿನವೇ ಒಟ್ಟಿಗೇ ಸೇರುತ್ತೇವೆ. ಹೆಂಗಸರು ಮಾರನೆಯ ದಿನದ ಹಬ್ಬದಡುಗೆಗೆ, ಪೂಜಾಕಾರ‌್ಯಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರೆ ನಾವು ಗಂಡಸರು, ಮಕ್ಕಳು ಮಂಟಪ ಕಟ್ಟಿ ಅದನ್ನು ಅಲಂಕಾರ ಮಾಡುವುದರಲ್ಲಿ ಮಗ್ನರು. ನಾವು ಚಿಕ್ಕವರಾಗಿದ್ದಾಗ ಪ್ರತಿ ಮನೆಯಲ್ಲೂ ಇದೊಂದು ಸ್ಪರ್ಧೆಯಂತಿರುತ್ತಿತ್ತು, ಯಾರ ಮನೆಯ ಮಂಟಪ ಚಂದವಿದೆಯೆಂದು. ಗಣೇಶ ಗೌರಿಯರ ವಿಗ್ರಹ ಆಯ್ಕೆ ಮಾಡಿ ತರುವುದೇ ಒಂದು ಸಡಗರದ ಸಂಗತಿ. ಸೊಂಡಿಲು ಬಲಕ್ಕೆ ತಿರುಗಿರಬೇಕು, ನಿರ್ದಿಷ್ಟ ರೀತಿಯ ತಿಲಕವಿರಬೇಕು, ವಿಗ್ರಹ ಮೈಸೂರು ಸಂಪ್ರದಾಯದ್ದಾಗಿರಬೇಕು ಇತ್ಯಾದಿ ಗಮನಿಸಿಯೇ ಗಣೇಶನನ್ನು ತರಬೇಕು. ಮನೆಗೆ ತಂದಾಗಲಂತೂ ಮನೆಯವರೆಲ್ಲರೂ ಬಾಗಿಲ ಬಳಿ ಬಂದು, ವಿಗ್ರಹ ಹಿಡಿದವರ ಕಾಲು ತೊಳೆದು ಸ್ವಾಗತಿಸುವ ಪರಿಯಂತೂ ಅದ್ಭುತ. ಹೀಗಾಗಿ ಗಣೇಶನ ವಿಗ್ರಹ ಹಿಡಿದುಕೊಳ್ಳಲೂ ಸ್ಪರ್ಧೆ. ಅದೊಂದು ಗೌರವದ ಸಂಗತಿ. ಪುತಿನ ಹೇಳುತ್ತಿದ್ದರು: ಹಬ್ಬಗಳೆಂದರೆ ಉತ್ಸವ. ನಮ್ಮ ಪಂಚೇಂದ್ರಿಯಗಳನ್ನು ತಣಿಸುವಂತೆ ಹಬ್ಬಗಳ ಸ್ವರೂಪವಿರುತ್ತದೆ. ಅಲಂಕಾರ ಮಾಡಿ ಕಣ್ಣು ತಣಿಯುತ್ತದೆ. ಸಂಗೀತದ ಮೂಲಕ ಕಿವಿಗೆ ಹಿತ. ಹಬ್ಬಗಳಲ್ಲಿ ಹಾಡುವುದು ಒಂದು ಕಾಲಕ್ಕೆ ಕಡ್ಡಾಯವಾಗಿತ್ತು. ಗಂಧದಕಡ್ಡಿ, ಕರ್ಪೂರ, ಸಾಂಬ್ರಾಣಿ- ಮೂಗಿಗೆ ಪರಿಮಳ ನೀಡುತ್ತದೆ. ರುಚಿ ರುಚಿಯಾದ ನೈವೇದ್ಯ ನಾಲಗೆಗಾಗಿ. ಹೀಗೆ ಪೂಜಾವಿಧಿ ನಮ್ಮ ಲೌಕಿಕವನ್ನು ಆಧರಿಸಿಯೇ ರೂಪುಗೊಂಡಿದೆ. ಪೂಜೆಯ ನೆಪದಲ್ಲಿ ಮನುಷ್ಯ ತನ್ನ ಬಯಕೆಗಳನ್ನು ಪೂರೈಸಿಕೊಳ್ಳುವ ಸಾಧನವೇ ಹಬ್ಬಗಳು. 

ಈಗ ಎಲ್ಲವೂ ಕಾಂಟ್ರಾಕ್ಟ್. ಮಂಟಪ, ಪೂಜಾಸಾಮಗ್ರಿ, ಗಣೇಶ ತರುವುದು, ನೈವೇದ್ಯದ ತಿನಿಸು- ಇವೆಲ್ಲ ಶಾಸ್ತ್ರಗಳಿಗೆ ಕಾಂಟ್ರಾಕ್ಟ್; ಊಟ, ಸಂಜೆಯ ಆರತಿ, ಗಣೇಶ ಬಿಡುವುದು, ಪ್ರಸಾದ ಇವೆಲ್ಲ ಇನ್ನೊಬ್ಬರಿಗೆ ಕಾಂಟ್ರಾಕ್ಟ್. ಒಟ್ಟಾರೆ ಇಡೀ ಹಬ್ಬ ಕಾಂಟ್ರಾಕ್ಟ್. ಅಡಿಗೆ ಮಾಡುವುದು ಕಾಂಟ್ರಾಕ್ಟ್ ತಿನ್ನುವುದನ್ನು ಕಾಂಟ್ರಾಕ್ಟ್ ಕೊಟ್ಟಿರಲಿಲ್ಲ! ಮುಂದೆ ಆ ವ್ಯವಸ್ಥೆಯೂ ಬರಬಹುದೇನೋ, ಯಾರೋ ಊಟ ಮಾಡಿ, ನಮ್ಮ ಹೊಟ್ಟೆ ತುಂಬುವಂಥದು! ಊಟ ಮಾಡುವ ಶ್ರಮವಾದರೂ ಯಾಕೆ? ಗೆಳೆಯನ ಪುಟ್ಟ ಮಗಳು ಹೇಳುತ್ತಿರುತ್ತಾಳೆ: `ತಟ್ಟೆ ತೆಗೆದುಕೊಂಡು, ಅನ್ನ ಸಾರು ಹಾಕಿಕೊಂಡು, ಅದನ್ನು ಕಲಸಿ, ಬಾಯಿಗಿಟ್ಟು, ಅಗಿದು, ನುಂಗಿ.... ಓಹ್! ಊಟ ಮಾಡುವುದು ಅದೆಷ್ಟು ಕಷ್ಟ! ಬದಲಿಗೆ ಒಂದು ಟ್ಯಾಬ್ಲೆಟ್ ಇದ್ದು, ನುಂಗಿಬಿಟ್ಟರೆ ಹೊಟ್ಟೆ ತುಂಬಿಬಿಡಬೇಕು, ಎಷ್ಟು ಚಂದ!~- ಇದು ಅವಳ ಮಾತಲ್ಲ, ಆಧುನಿಕ ಸಮುದಾಯದ ದನಿ.
 
 ಆಧುನಿಕ ಜಗತ್ತು ಎದುರಿಸುತ್ತಿರುವ ಬಹುಮುಖ್ಯ ಸವಾಲೆಂದರೆ ಪೈಪೋಟಿಯ ಜೊತೆಗೆ ಸದಾ ಅನಿಶ್ಚಿತತೆ, ಅಭದ್ರತೆ, ಅನಗತ್ಯ ಹೋಲಿಕೆ. ನೀವು ಸುಮಾರು ವರುಷ ಒಂದೇ ಕಡೆ ಕೆಲಸದಲ್ಲಿದರೆ ಈ ಆದುನಿಕರಿಂದ ನಿಮಗೊಂದು ಪ್ರಶ್ನೆ ಎದುರಾಗುತ್ತದೆ ನಿಮಗೆ ಒಂದೇ ಕೆಲಸ ಬೋರ್ ಹೊದಿಸಿಲ್ಲವ ಎಂದು, ಈ ಪ್ರಶ್ನೆಯನ್ನು ಕೇಳುವ ಮನೋಭಾವ ಎಂಥದು? ಬದುಕಿಡೀ ಒಬ್ಬಳೇ ಹೆಂಡತಿ, ಅದೇ ಮಗ, ಅದೇ ಮನೆ - ಬೋರಾಗಲು ಶುರುವಾದರೆ ಬದುಕುವುದು ಹೇಗೆ? ನನ್ನ ಕೆಲಸ ಎಂದೂ ನನಗೆ ಬೇಸರ ತರಿಸಲಿಲ್ಲ. ಆ ಪರಿಸರ, ಅಲ್ಲಿನ ಜನಗಳು, ಅಲ್ಲಿನ ಪ್ರತಿಯೊಂದು ವಸ್ತು ಎಲ್ಲವೂ ನನ್ನ ಬದುಕನ್ನು ರೂಪಿಸಿದ ಚೈತನ್ಯದಾಯಕ ಶಕ್ತಿಗಳು. ನನ್ನ ಭಾವಜಗತ್ತಿನಲ್ಲಿ ಆ ಸಂಸ್ಥೆಗೆ ಮಹತ್ವದ ಸ್ಥಾನವಿದೆ.

ಈಗಿನ ಪರಿಸ್ಥಿತಿ ನೋಡಿ, ಯಾವುದಾದರೂ ಒಂದೇ ಕೆಲಸದಲ್ಲಿ, ಒಂದೇ ಸಂಸ್ಥೆಯಲ್ಲಿ ಐದು ವರ್ಷ ಇರುತ್ತಾನೆಂದರೆ, ಆತ ಅದಕ್ಷ ಎಂಬ ಭಾವವಿದೆ. `ಜಂಪ್~ ಇವತ್ತಿನ ಜಗತ್ತಿನ ಬೀಜ ಮಂತ್ರ. ಎಲ್ಲಿ ಲಾಭವಿದೆಯೋ ಅಲ್ಲಿಗೆ `ಜಂಪ್~. ಎಲ್ಲ ರಂಗಗಳಲ್ಲಿಯೂ ಇದೇ ಮನೊಭಾವ. ನಮ್ಮ ರಾಜಕೀಯದಲ್ಲಂತೂ ಇದು ಅಸಹ್ಯ ಹುಟ್ಟಿಸುವ ಮಟ್ಟ ತಲುಪಿದೆ.

ಜಿಡ್ಡು ಕೃಷ್ಣಮೂರ್ತಿಯವರ ಪರಿಭಾಷೆಯಲ್ಲಿ ಹೇಳುವುದಾದರೆ ನಮ್ಮ ಮನಸ್ಸಿನ ತುಂಬ ಬಿಂಬಗಳು ತುಂಬಿವೆ (fragments). ಈ ಸ್ಪರ್ಧಾ ಜಗತ್ತಿನಲ್ಲಿ ಹೇಗೆ ಮುನ್ನುಗ್ಗಬೇಕು. ಬೇರೆಯವರನ್ನು ಹೇಗೆ ಹಣಿಯಬೇಕು, ಯಾವ ಸಂಚು ರೂಪಿಸಿದರೆ ಯಶಸ್ಸು ಸಿಗುತ್ತದೆ, ಯಾವ ನಡೆ ಎಷ್ಟು ಲಾಭ ತರುತ್ತದೆ ಇಂತಹ ಬಿಂಬಗಳೇ ಮನಸ್ಸಿನ ತುಂಬ ತುಂಬಿವೆ. ಇವುಗಳ ಮೂಲಕವೇ ಜಗತ್ತನ್ನು ನೋಡುತ್ತಿದ್ದೇವೆ ಅಥವಾ ಇದಿಷ್ಟೇ ನಮ್ಮ ಜಗತ್ತಾಗಿಬಿಟ್ಟಿದೆ. 

ನಮಗಿಂದು ನಮ್ಮದೇ ಆದಂತಹ ನಮ್ಮದೇ ಜಗತ್ತಿನ ಗೂಡುಗಳು ಬೇಕಾಗಿವೆ. ತನ್ಮಯತೆ ಸಾಧ್ಯವಾಗುವ, ಬಾಹ್ಯಜಗತ್ತನ್ನು ಮರೆಯುವ, ಅಂತರಂಗದ ಅನಂತವಾರಿಧಿಯಲ್ಲಿ ಲೀನವಾಗುವ ಧ್ಯಾನಶೀಲ ಮನಸ್ಥಿತಿಯನ್ನು ಪಡೆದುಕೊಳ್ಳಬೇಕಿದೆ. ಇಲ್ಲದಿದ್ದಲ್ಲಿ ಮಹತ್ವವನ್ನು ನಾವು ಸೃಷ್ಟಿಸಲಾರೆವು. ಅಲ್ಪದರಲ್ಲೇ ಕಳೆದುಹೋಗುವ ಅಪಾಯವಿದೆ. 
ಫಸ್ಟ್ ಸ್ಟೆಪ್ ಇಸ್ ದಿ ಲಾಸ್ಟ್ ಸ್ಟೆಪ್.